ಶಿವರುದ್ರಪ್ಪ, ಜಿ ಎಸ್
	1926-. ಕನ್ನಡದ ಹೆಸರಾಂತ ಕವಿ, ವಿದ್ವಾಂಸ, ವಿಮರ್ಶಕ. ಕಾವ್ಯ, ಕಾದಂಬರಿ, ನಾಟಕ, ಗ್ರಂಥಸಂಪಾದನೆ, ಪ್ರವಾಸಕಥನ-ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಮಾಡಿದ್ದಾರೆ. ಇವರು 1926 ಫೆಬ್ರವರಿ 7 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವನ್ನು ರೂಪಿಸಿದವರು ಇವರೇ.

	ಶಾಲಾ ಉಪಾಧ್ಯಾಯರ ಮಗನಾದ ಇವರು ಬಡತನದಲ್ಲಿ ಬೆಳೆದರು. ಬಾಲ್ಯದಲ್ಲೇ ಓದುವ ಅಭಿರುಚಿ ಇದ್ದ ಇವರ ಮೇಲೆ ಶಿವರಾಮ ಕಾರಂತ, ಕುವೆಂಪು, ಡಿ.ವಿ.ಜಿ, ವಡ್ರ್ಸ್‍ವರ್ಥ್, ಎಲಿಯಟ್‍ರ ಪ್ರಭಾವ ಸಾಕಷ್ಟಾಯಿತು. ಹಳ್ಳಿಗಾಡಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು 1945ರಲ್ಲಿ ಇಂಟರ್‍ಮಿಡಿಯಟ್ ತೇರ್ಗಡೆ ಹೊಂದಿ, ಮುಂದೆ ಓದುವ ಆಸೆ ಇದ್ದರೂ ಬಡತನದಿಂದಾಗಿ ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತ ರಾಗಿ ಸೇರಿದರು. ಸ್ವಂತ ದುಡಿಮೆಯ ಬಲದಿಂದಲೇ 1949ರಲ್ಲಿ ಮೊದಲ ವರ್ಗ, ಮೊದಲಸ್ಥಾನದಲ್ಲಿ ಸುವರ್ಣ ಪದಕದೊಂದಿಗೆ ಪದವಿ ಪಡೆದರು. 1953ರಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನದಲ್ಲಿ ಸ್ವರ್ಣಪದಕದೊಂದಿಗೆ ಕನ್ನಡ ಎಂ.ಎ. ಪದವಿ ಪಡೆದರು. 1960ರಲ್ಲಿ ಕುವೆಂಪು ಮಾರ್ಗದರ್ಶನ ದಲ್ಲಿ ಸಂಶೋಧನೆ ಕೈಗೊಂಡು ಸೌಂದರ್ಯ ಸಮೀಕ್ಷೆ ಪ್ರೌಢಪ್ರಬಂಧ ಕ್ಕಾಗಿ ಡಾಕ್ಟೊರೇಟ್ ಪದವಿ ಪಡೆದರು.

	ಮೈಸೂರು ವಿಶ್ವವಿದ್ಯಾನಿಲಯದ ದಾವಣಗೆರೆ, ಶಿವಮೊಗ್ಗ, ಅನಂತರ ಮೈಸೂರಿನ ಯುವರಾಜಕಾಲೇಜು, ಮಹಾರಾಜ ಕಾಲೇಜು, ಮಾನಸಗಂಗೋತ್ರಿಗಳಲ್ಲಿ ಅಧ್ಯಾಪಕರಾಗಿ ದುಡಿದರು (1949-63). ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಕನ್ನಡ ವಿಭಾಗದ ರೀಡರ್ ಮತ್ತು ಮುಖ್ಯಸ್ಥರಾಗಿ (1963-66), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರೀಡರ್ (1966-70) ಹಾಗೂ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ (1970-86) ದುಡಿದಿದ್ದಾರೆ.

	ಇವರು ಕವನ ರಚನೆ ಪ್ರಾರಂಭಿಸಿದ್ದು 14-15 ವರ್ಷದವರಿದ್ದಾಗ, ಇಂಟರ್ ಮೀಡಿಯೆಟ್‍ನಲ್ಲಿದ್ದಾಗ. ಜಿ.ಪಿ.ರಾಜರತ್ನಂರಿಂದ ಕವನರಚನೆಗೆ ಸಲಹೆ, ಮಾರ್ಗದರ್ಶನ, ಮೈಸೂರಿನಲ್ಲಿದ್ದಾಗ ಕುವೆಂಪು, ತ.ಸು.ಶಾಮರಾಯರ ಪ್ರೋತ್ಸಾಹ ದೊರಕಿತು. ಶ್ರೇಷ್ಠತರುಣ ಕವಿಗಳಿಗೆ ದೊರಕುತ್ತಿದ್ದ ಬಿ.ಎಂ.ಶ್ರೀ ಪುದುವಟ್ಟಿನ ಚಿನ್ನದ ಪದಕ ಇವರ ಬೀಳ್ಕೊಡಿಗೆ ನೀಳ್ಗವನಕ್ಕೆ ದೊರಕಿತು. ಮಾಸ್ತಿಯವರ ಜೀವನದಲ್ಲಿ ಪ್ರಥಮ ಕವನ ಪ್ರಕಟವಾಯಿತು. ಗುಬ್ಬಿಯ ಆಹಾರ ಇಲಾಖೆಯಲ್ಲಿದ್ದಾಗ ಬರೆದ, ಭ್ರಷ್ಟಾಚಾರಗಳ ಚಕ್ರವ್ಯೂಹಕ್ಕೆ ಸಿಕ್ಕು ಒದ್ದಾಡುವ ಪ್ರಾಮಾಣಿಕ ಗುಮಾಸ್ತೆಯೊಬ್ಬನ ಕತೆ ಚಕ್ರವ್ಯೂಹ ಪ್ರಕಟಗೊಳ್ಳಲಿಲ್ಲ. ಕೊನೆಗೂ ಇವರ ಮನೋಧರ್ಮಕ್ಕೆ ತಕ್ಕ ಅಧ್ಯಾಪಕ ವೃತ್ತಿ ದೊರಕಿತು. ನಿರಂತರ ಅಧ್ಯಯನ, ಪಕ್ವ ಪಾಂಡಿತ್ಯ, ಲೇಖನ, ಶಿಸ್ತುಗಳನ್ನು ಅಳವಡಿಸಿಕೊಂಡರು. ಇವರ ಶ್ರಮ ಮತ್ತು ಮುಂದಾಲೋಚನೆಯ ಫಲವಾಗಿ ಅರಳಿದ್ದು ಕನ್ನಡ ಅಧ್ಯಯನ ಕೇಂದ್ರ. ಅಲ್ಲಿ ನಡೆದ ವಿಚಾರಸಂಕಿರಣಗಳು; ಅದರಲ್ಲಿ ತೋರಿದ ಕ್ರಿಯಾ ಶೀಲತೆ, ಸಮಭಾವ; ಪ್ರಕಟಣ ಕಾರ್ಯದಲ್ಲಿ ತೋರಿದ ಕತೃತ್ವ ಶಕ್ತಿ-ಉಲ್ಲೇಖನೀಯ.

	ಇವರು ಬರೆಯತೊಡ ಗಿದ್ದು ಸ್ವಾತಂತ್ರ್ಯದ ಉದಯ ತಂದ ಹೊಂಗನಸುಗಳು ಮಾಯವಾಗಿ ನಿರಾಸೆ ಮುಸು ಕಿದ್ದ, ಇತಿಹಾಸದ ಮಹತ್ತ್ವದ ಕಾಲದಲ್ಲಿ. ಅದು ನವೋದಯ ಮಾರ್ಗದೊಡನೆ ಸ್ಪರ್ಧಿಸಿದ ಪ್ರಗತಿಶೀಲ ಮಾರ್ಗ ಕೊನೆಗೊಂಡು ನವ್ಯಕಾವ್ಯ ಪ್ರಭಾವಶಾಲಿಯಾದ ಕಾಲ. ರಾಮಕೃಷ್ಣ, ಅರವಿಂದ, ರವೀಂದ್ರ ನಾಥ ಠಾಕೂರ್, ವಿವೇಕಾನಂದರ ಪ್ರಭಾವ; ಸಂಸ್ಕøತಿಯ ಬಾಹ್ಯ ರೂಪವಾಗಿದ್ದ ಎಲ್ಲ ವೈದಿಕ ಆಚರಣೆಗಳನ್ನು ಅಲ್ಲಗಳೆಯುವ, ಆದರೆ ವೇದ ಉಪನಿಷತ್ತುಗಳನ್ನು ಒಪ್ಪಿಕೊಳ್ಳುವ ಧೋರಣೆ; ಇದರಿಂದ ಫಲಿಸಿದ-ಹಿರಿಯದಕ್ಕೆ ನಮಿಸುವ, ಅನ್ಯಾಯವಾದದ್ದನ್ನು ವಿರೋಧಿಸುವ ಗುಣ; ಕಾವ್ಯವು ಕೇವಲ ಉದಾತ್ತ ಭಾವನೆಗಳ ಅಭಿವ್ಯಕ್ತಿಗೆ ಮಾತ್ರ, ಕ್ಷುಲ್ಲಕ ಅಶಿವ ಭಾವನೆಗಳಿಗೆ ಅಲ್ಲಿ ಅವಕಾಶವಿಲ್ಲವೆಂಬ ಸಮಕಾಲೀನ ಕಾವ್ಯಕಲ್ಪನೆ; ಜೊತೆಗೆ ಗ್ರಾಮೀಣ ರೈತ ಪರಿಸರದಲ್ಲಿ ಅನ್ಯನಾಗಿ ಬೆಳೆದದ್ದರಿಂದ ಉಂಟಾದ ಆತ್ಮಾಭಿಮಾನ, ಆದರ್ಶಪ್ರಿಯತೆ; ದೈವಭಕ್ತಿ ನೆಲೆಗೊಂಡಮನ-ಇವು ಅವರ ಕಾವ್ಯವನ್ನು ನಿಯಂತ್ರಿಸಿದುವು. ನವ್ಯದ ಸತ್ವ ಇವರಲ್ಲಿ ಬಳಕೆಯಾದದ್ದು ಇವರ ಸಾಂಪ್ರದಾಯಿಕತೆಗೆ ಪೂರಕವಾಗಿ ಮಾತ್ರ. ಆದರೆ, ಪ್ರಭಾವದ ದೃಷ್ಟಿಯಿಂದ ಇವರಿಗಿದ್ದ ರಾಜಕೀಯ, ಸಾಂಪ್ರದಾಯಿಕ ಹಿನ್ನೆಲೆಗಿಂತ ಇವರ ವೈಯಕ್ತಿಕ ಜೀವನದ ದಿಕ್ಕುದೆಸೆಗಳೇ ಇವರ ಕಾವ್ಯದ ಅಭ್ಯಾಸದ ದೃಷ್ಟಿಯಿಂದ ಹೆಚ್ಚು ಮಹತ್ತ್ವವಾದುವು-ಎಂಬುದು ಕೆಲವು ವಿಮರ್ಶಕರ ಅಭಿಮತ.

	ನವೋದಯ-ನವ್ಯಗಳ ಅನೇಕ ಮಿತಿಗಳನ್ನು ದಾಟುವ ಸೂಚನೆಗಳು ದುಃಸ್ವಪ್ನದಂಥ ಕವನಗಳಲ್ಲಿ ಕಂಡಿದೆ. ಕಾಲ ಮತ್ತು ಮಾನವ, ಈ ಎರಡರ ಸಂಬಂಧ ಹಾಗೂ ಸಂಘರ್ಷ, ನಾಗರಿಕ ಬದುಕಿನಲ್ಲಿ ಮನುಷ್ಯ ದಿನದಿಂದ ದಿನಕ್ಕೆ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಿರುವ ದುರಂತ, ವ್ಯಕ್ತಿ-ವ್ಯಕ್ತಿಗಳ ನಡುವಣ ಸಂಪರ್ಕರಾಹಿತ್ಯದಿಂದ ಉಂಟಾಗಿರುವ ಏಕಾಕಿತನದ ವಿಷಾದ ಇವು ಸ್ಥೂಲವಾಗಿ ಅವರ ಕಾವ್ಯವಸ್ತು.

	ಈವರೆಗೆ ಇವರ ಅನೇಕ ಕವನ ಸಂಕಲನಗಳು ಪ್ರಕಟವಾಗಿವೆ; ಬಹುತೇಕ ಮರುಮುದ್ರಣ ಕಂಡಿವೆ; ಚೆಲುವು-ಒಲವು ಸಂಕಲನ ಐದು ಮುದ್ರಣ ಕಂಡಿರುವುದು ಇದರ ಜನಪ್ರಿಯತೆಯ ದ್ಯೋತಕ. ತ.ಸು. ಶಾಮರಾಯರು ಆರಂಭಿಸಿದ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯಲ್ಲಿ ಪ್ರಕಟಗೊಂಡದ್ದು ಇವರ ಮೊದಲ ಸಂಕಲನ ಸಾಮಗಾನ (1951); ಬಹುಪಾಲು ಪ್ರಕೃತಿ ಕವನಗಳು, ಪ್ರಕೃತಿ ಗೀತೆಗಳು ಮತ್ತು ಸಾಂಸಾರಿಕ ಗೀತೆಗಳ ಸಂಕಲನ ಚೆಲುವುಒಲವು (1953). ಈ ಕವನಗಳ ಮೂಲದಲ್ಲಿ ರಸಸ್ಥಿತಿಯನ್ನು ರಚಿಸುವ ಸತತ ಪ್ರೇರಣೆ ಇದೆ. ಕವಿ ಇಲ್ಲಿ ಆಶಾವಾದಿ; ನವೋದಯ ಕಾವ್ಯದ ಹಾದಿಯಲ್ಲಿ ನಡೆಯುತ್ತಾ ನವ್ಯಕ್ಕೆ ಇಣುಕುಹಾಕುವ ಕವಿಯನ್ನು ದೇವ ಶಿಲ್ಪದಲ್ಲಿ (1956) ಕಾಣಬಹುದು. ಗಂಭೀರವಾಗಿರುತ್ತಿದ್ದ ಕವನಕ್ಕೆ ಇಲ್ಲಿ ಹಾಸ್ಯ, ವ್ಯಂಗ್ಯ ಸೇರಿ ಲವಲವಿಕೆ ಬಂದಿದೆ. ಅನುಭವ, ಅಭಿವ್ಯಕ್ತಿ ಮತ್ತು ಜೀವನದ ತತ್ತ್ವಗಳೆಲ್ಲದರ ದೃಷ್ಟಿಯಿಂದ ಹಾಗೂ ಇವರ ಕಾವ್ಯಶಕ್ತಿಯ ಸಾಧ್ಯತೆಗಳ ದೃಷ್ಟಿಯಿಂದ ದೀಪದ ಹೆಜ್ಜೆ (1959) ಗಮನಾರ್ಹ ಕೃತಿ. ಕವಿಜೀವ-ವಿಶ್ವಾತ್ಮ-ನಿಸರ್ಗಗಳ ತ್ರಿಕೋಣದಲ್ಲಿ ಸಂಚರಿಸುತ್ತ ಏಕಾಕಿತನದ ಅನುಭವದಲ್ಲೇ ಇರುತ್ತಿದ್ದ ಕವನಗಳಲ್ಲಿ ಮಾನವ ಪ್ರಪಂಚದ ಸಂಕೀರ್ಣತೆ ಪ್ರತ್ಯಕ್ಷವಾಗುವುದು ಈ ಸಂಕಲನದಲ್ಲಿ. ಆತ್ಮಶೋಧ, ವಸ್ತುನಿಷ್ಠತೆ, ಮಾನವ-ಅಂತರಂಗ, ಮಾನವ-ಕಾಲ-ಇವುಗಳ ವಿವೇಚನೆ ಇಲ್ಲಿದೆ. ನವ್ಯ, ನವೋದಯ ಕವಿತೆಗಳು ಸಮಸಮವಾಗಿರುವ ಕಾರ್ತೀಕ (1961) ಜೀವನದ ನಲಿವನ್ನು ಸ್ವಾಗತಿಸುವಂಥದು. ತೀರ್ಥವಾಣಿ (1960); ಬೇರೆಬೇರೆ ಕವಿಗಳು ರಚಿಸಿದ ಪರಮಹಂಸರ ಅನುಭಾವ ಪೂರ್ಣ ಕಂಠದಿಂದ ಹರಿದುಬಂದ ಗೀತೆಗಳ ಕನ್ನಡ ರೂಪ. ಅನಾವರಣ (1963) ತಾನು ನಿಂತ ನಿಜದ ನೆಲೆ ಯತ್ತ ದೃಷ್ಟಿಹರಿಸಿದೆ; ಮನುಷ್ಯನ ಅವನತಿಗಾಗಿ ಕೊರಗು, ಚಿಕಿತ್ಸಕ ದೃಷ್ಟಿ ಇಲ್ಲಿದೆ. ಅನೇಕ ಉತ್ತಮ ಭಾವಗೀತೆಗಳ ಸಂಕಲನವಿದು. ತೆರೆದದಾರಿ (1966) ಓದುಗನನ್ನು ಚಿಂತನಗೆ ದೂಡುವ ಕವನಗಳು. ಮನುಷ್ಯ ಮನುಷ್ಯನ ನಡುವೆ ಎದ್ದಿರುವ ಗೋಡೆಯ ಬಗೆಗೆ ಹರಿದ ದುಃಖ ದುಮ್ಮಾನ ಗೋಡೆ (1972). 9 ಸಂಕಲನಗಳ 117 ಉತ್ತಮ ರಚನೆಗಳನ್ನು ಆರಿಸಿದ ಸಂಕಲನ, ನನ್ನ ನಿನ್ನ ನಡುವೆ (1973). ಕಾಡಿನ ಕತ್ತಲಲ್ಲಿ (1981), ಪ್ರೀತಿ ಇಲ್ಲದ ಮೇಲೆ, ಚಕ್ರಗತಿ (1992), ವ್ಯಕ್ತಮಧ್ಯ (1999) ಇವರ ಈಚಿನ ಕವನ ಸಂಕಲನಗಳು. 1987ರಲ್ಲಿ ಸಮಗ್ರಕಾವ್ಯ ಪ್ರಕಟವಾಗಿದೆಯಲ್ಲದೆ 1997ರಲ್ಲಿ ಇದರ ವಿಸ್ತøತ ಪ್ರಕಟಣೆಹೊರಬಂದಿದೆ.

	ಗೋಪಾಲಕೃಷ್ಣ ಅಡಿಗರ ಅನಂತರದ ತಲೆಮಾರಿನಲ್ಲಿ ತಮ್ಮ ವಿಶಿಷ್ಟಧ್ವನಿ, ಅತಿರೇಕವಲ್ಲದ ವೈವಿಧ್ಯಮಯ ಕಾಳಜಿಗಳಿಂದ ಕನ್ನಡದ ಮಹತ್ತ್ವದ ಕವಿಗಳಲ್ಲಿ ಇವರು ಒಬ್ಬರಾಗಿದ್ದಾರೆ. ಇವರದು ರೂಪ-ಸತ್ವ  ಸಂಪನ್ನವಾದ ಸುಸಂಸ್ಕøತ, ಸೌಂದರ್ಯನಿಷ್ಠ, ನಿರ್ದುಷ್ಟ, ಸ್ಪಷ್ಟ, ಅರ್ಥಪೂರ್ಣ, ರಮಣೀಯ ಕವನಗಳು. ಇವರು ಪರಂಪರೆ, ಪರಿಸರದ ಸಮನ್ವಯ ಸಾರುವ ಪ್ರಯೋಗ ಶೀಲ, ಮುಕ್ತಪ್ರಜ್ಞೆಯ ಕವಿ. ಇವರದು ಯಾವುದೇ ಸಿದ್ಧಾಂತಕ್ಕೆ ಕಟ್ಟುಬೀಳದ ಸೇತುವೆ ಕಾವ್ಯ. ಶಿವ, ಸತ್ಯ, ಸುಂದರವಾದದ್ದನ್ನು ಆರಾಧಿಸುವ ಊಧ್ರ್ವ ಗಮನಾಭಿಲಾಷೆ, ಆದರ್ಶೋನ್ಮುಖವಾದ ಅಭೀಪ್ಸೆ, ಭಾವಗೀತೆಗಳ ಯಶಸ್ಸಿಗೆ ಕಾರಣವಾಗುವ ಮಾರ್ದವತೆ, ವೈಚಾರಿಕ ವಸ್ತು ಮತ್ತು ಹೊಸ ಪ್ರಜ್ಞೆಗಳು ಇವರ ಕೆಲವು ಕವನಗಳ ಸೋಲಿಗೂ ಕಾರಣವಾಗುತ್ತವೆ. ಇವರ ಕಲೆಯ ಲೇಪ ಕೃತಿಯ ಅಂತರಂಗದ ವಸ್ತುವನ್ನು ಕಟ್ಟುವುದಕ್ಕಿಂತ ಹೆಚ್ಚಾಗಿ ಬಾಹ್ಯ ಅಲಂಕಾರಗಳಲ್ಲಿ ಮಾತ್ರ ಪರ್ಯವಸಾನವಾಗುತ್ತದೆ ಎಂಬ ಟೀಕೆ ಕೂಡ ಇದೆ.

	ತಮ್ಮ ಆವೇಶಗಳನ್ನು ಹದಗೊಳಿಸಿದ ಅನಂತರವೇ ಅವುಗಳಿಗೆ ಭಾಷೆಯ ರೂಪವನ್ನು ಸಾಧಿಸುವ ಇವರ ಸಾಧನೆ ಭಾವಗೀತೆಗಳಲ್ಲಿ ಅದ್ವಿತೀಯವಾಗಿ ಕಾಣುತ್ತದೆ. ಪ್ರಕೃತಿಯ ಬಗೆಗೆ ತಮ್ಮದೇ ಆದ ನಿಲುವು, ಭಾವನೆಗಳನ್ನು ತಳೆದ ಇವರು ಉಳಿದ ಕವಿಗಳಿಂದ ಪ್ರಕೃತಿವರ್ಣನೆಯಲ್ಲಿ ಭಿನ್ನವಾಗಿದ್ದಾರೆ. ಪ್ರಮುಖವಾಗಿ ಇವರು ಚಿತ್ರಿಸಿರುವುದು ನಗರ ಸಮಾಜ. ಆಡುಭಾಷೆಯನ್ನು ಪಳಗಿಸಿ ತಮ್ಮ ಆಶಯವನ್ನು ಹೆಚ್ಚು ಸಮರ್ಥವಾಗಿ ಅಭಿವ್ಯಕ್ತಗೊಳಿಸಿದ್ದು ಕೆಲವು ಸಂಕಲನಗಳಲ್ಲಿ ಕಾಣುತ್ತದೆ. ಮೊದಲ ಸಂಕಲನಗಳಲ್ಲಿ ವಿಡಂಬನೆಯ ಸುಳಿವೇ ಇಲ್ಲದಿದ್ದರೂ ಬರುಬರುತ್ತ ಇದೇ ಒಂದು ವಿಶಿಷ್ಟ ದೃಷ್ಟಿಕೋನ ವಾಗುತ್ತದೆ. ರಾಷ್ಟ್ರ ಜೀವನದ ಗೊಂದಲ, ರಾಜಕೀಯ ಗೋಸುಂಬೆತನ, ಸುತ್ತಲಿನ ವ್ಯಕ್ತಿಗಳ ಪೊಳ್ಳುತನ, ಉಸಿರುಗಟ್ಟುವ ನಗರ ಜೀವನಗಳಿಗೆ ಸಂಬಂಧಿಸಿದ ವಿಡಂಬನೆ ಇವರ ಕವನಗಳಲ್ಲಿ ಪೂರ್ಣ ತಾತ್ತ್ವಿಕ ನೆಲೆಯಾಗಿ ಪ್ರಕಟವಾಗುತ್ತದೆ ಎಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.

	ಇವರು ಸಾಹಿತ್ಯದ ಇತರ ಪ್ರಕಾರಗಳಲ್ಲೂ ದುಡಿದಿದ್ದಾರೆ. ಕೆ.ಬಿ.ಪ್ರಭು ಪ್ರಸಾದರ ಜೊತೆಗೂಡಿ ಇವರು ಬರೆದ ರೇಡಿಯೊ ನಾಟಕಗಳು 1954-61ರ ನಡುವೆ ಆಕಾಶವಾಣಿಯಿಂದ ಬಿತ್ತರಗೊಂಡವು, ಪ್ರಬುದ್ಧ ಕರ್ಣಾಟಕದಲ್ಲೂ ಕಾಣಿಸಿಕೊಂಡುವು. ರಾಣಿ ದುರ್ಗಾವತಿ ಸು. 400 ವರ್ಷಗಳಷ್ಟು ಹಿಂದಿನ ಅಕ್ಬರನ ಕಾಲದ ಚರಿತ್ರೆಯ ಸಣ್ಣದೊಂದು ಘಟನೆಯನ್ನಾಧರಿಸಿದ್ದು. ಬಸವಣ್ಣ ಕಪ್ಪಡಿಯಲ್ಲಿ ಐಕ್ಯವಾಗುವುದನ್ನು ನಿರೂಪಿಸುವುದು ಮಹಾಸಂಗಮ. ಇಲ್ಲಿನ ಸಂಭಾಷಣೆ ಗೀತಾತ್ಮಕವಾಗಿದೆ. ಪ್ರಭುಲಿಂಗಲೀಲೆಯ ಮಾಯಾಪ್ರಸಂಗ ಮತ್ತು ಅಕ್ಕಮಹಾದೇವಿಯ ಪ್ರಸಂಗಗಳನ್ನು ಒಂದೆಡೆ ಬಟ್ಟಿಯಿಳಿಸಿದ ರಸಘಟ್ಟಿ ನಾದಸೇತು. ಈ ಎರಡೂ ನಾಟಕಗಳ ವಸ್ತುವಿನಲ್ಲಿ ಕೆಲವು ಬದಲಾವಣೆ ಮಾಡಿದೆ. ರಾಹುಲ ಸಾಂಕೃತ್ಯಾಯನರ ಪ್ರಭಾ ಎಂಬ ಸಣ್ಣಕಥೆಯನಾಧüರಿಸಿದ ಇದೇ ಹೆಸರಿನದು ಇನ್ನೊಂದು ಪ್ರಸಾರ ನಾಟಕ. ಈ ನಾಟಕಗಳಲ್ಲಿ ಪ್ರಬುದ್ಧ ನಾಟಕಕಾರನ ಲಕ್ಷಣಗಳನ್ನು ಕಾಣಬಹುದು.

	ಪ್ರಕಟಿತ ಮೊದಲ ಗದ್ಯಕೃತಿ ಕರ್ಮಯೋಗಿ-ರಾಘವಾಂಕ ಕವಿಯ ಸಿದ್ಧರಾಮ ಚಾರಿತ್ರದ ಆಧಾರದಿಂದ ರಚಿತವಾದ ಕಾದಂಬರಿ (1956). ಜೀವನಚರಿತ್ರೆಯ ಯಥಾರ್ಥಗ್ರಹಣದೃಷ್ಟಿ, ಕಾದಂಬರಿಯ ನಿರೂಪಣಾ ಕೌಶಲ, ಕಾವ್ಯದ ರಸಪರತೆಗಳು ಇಲ್ಲಿ ಸಂಗಮಿಸಿವೆ. ನೇರವಾಗಿ ಓಟವನ್ನು ತಪ್ಪಿಸಿ ಕಥಾನಕಗಳನ್ನು ಬಳಸಿಕೊಂಡು ಸಿದ್ಧರಾಮನ ವ್ಯಕ್ತಿತ್ವವನ್ನೇ ಕೇಂದ್ರವಾಗಿರಿಸಿಕೊಂಡ ಈ ಕೃತಿ ವಿಶಿಷ್ಟವಾಗಿದೆ. ಸಿದ್ಧರಾಮನ ಅನವಶ್ಯಕ ಪೌರಾಣಿಕ ತೊಡರುಗಳನ್ನು ನಿವಾರಿಸಿ ಕರ್ಮಯೋಗಿಯಾಗಿಸಿರುವುದು ನೂತನ. ಐದು ಮುದ್ರಣಗಳನ್ನು ಕಂಡ ಈ ಕೃತಿ ಬಲು ಜನಪ್ರಿಯವಾಗಿದೆ.

	ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾದ ನಮ್ಮದಿಬ್ಬ ದಾವಣಗೆರೆಯ ಸ್ನೇಹಿತರೊಂದಿಗೆ ವಿಹಾರಕ್ಕೆ ಹೋಗುತ್ತಿದ್ದ ದಿಬ್ಬವೊಂದರ ಆತ್ಮೀಯ ಚಿತ್ರಣ. ಭಾರತ ಮತ್ತು ರಷ್ಯಗಳನ್ನು ತುಲನಾತ್ಮಕ ಕಣ್ಣುಗಳಿಂದ ನೋಡಿದ ತೆರೆದ ಮನದ ವರ್ಣನೆ ಮಾಸ್ಕೋದಲ್ಲಿ 22 ದಿನ (1973). ಅಲ್ಪಕಾಲದ ಪ್ರವಾಸ ಮತ್ತು ಭಾಷೆಯ ತೊಡಕಿನ ಮಿತಿಗಳ ಅರಿವು ಲೇಖಕರಿಗಿದೆ. ಸಂಸ್ಕøತಿಯನ್ನು ಅದರ ಬೇರೆಬೇರೆ ಮುಖಗಳಲ್ಲಿ ಅರ್ಥಮಾಡಿಕೊಳ್ಳ ಬಯಸುವ ಮಹತ್ತ್ವಾಕಾಂಕ್ಷೆಯ ಕಥನ ಗಂಗೆಯ ಶಿಖರಗಳಲ್ಲಿ (1985). ಹಾಗಾಗಿ ತಾವು ಕಂಡದ್ದನ್ನೆಲ್ಲ ಸೂಕ್ಷ್ಮವಾಗಿ ಕಲಾತ್ಮಕವಾಗಿ ದಾಖಲಿಸುವುದು ಇವರಿಗೆ ಸಾಧ್ಯವಾಗಿದೆ. ಗಂಗೆಯ ಶಿಖರಗಳಲ್ಲಿ, ಅಮೆರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ ಇವರ ಇತರ ಪ್ರವಾಸಕಥನಗಳು.

	ಚತುರಂಗ (1986) ಒಂದು ಅಸಮಗ್ರ ಆತ್ಮಕತೆ. ಆದರೂ ಕಲಾನಿರ್ಮಿತಿಯಾಗಿ ಪೂರ್ಣವಾಗಿ ಕಾಣುವುದು ಅದರ ವಿಶೇಷ.

	ಇವರು ಒಬ್ಬ ಸಹೃದಯ ವಿಮರ್ಶಕ. ಕುಹಕ ಕುಚೋದ್ಯ ಇಲ್ಲದ ನೇರಮಂಡನೆಯ ತೀ.ನಂ.ಶ್ರೀ, ಕುವೆಂಪು ಪರಂಪರೆಯಲ್ಲಿ ಮುಂದುವರಿದ ಇವರ ವಿಮರ್ಶೆ ಪ್ರಾಯೋಗಿಕ ವಿಮರ್ಶೆಯ ಮಾರ್ಗವನ್ನು ಸ್ಥಾಪಿಸಿದೆ, ದರ್ಶನ ವಿಮರ್ಶೆಯ ದಾರಿಯನ್ನು ವಿಶಾಲಗೊಳಿಸಿದೆ. ಪಾಶ್ಚಾತ್ಯ ವಿಮರ್ಶೆಯ ಜೊತೆಗೆ ಭಾರತೀಯ ಕಾವ್ಯಮಿಮಾಂಸೆಯನ್ನು ಆಳವಾಗಿ ಅಭ್ಯಾಸ ಮಾಡಿದ್ದರಿಂದ ಇವರ ವಿಮರ್ಶೆಗೆ ತನ್ನದೇ ಆದ ಗಾಂಭೀರ್ಯವಿದೆ. ನಮ್ಮಲ್ಲಿ ವಿಮರ್ಶೆಯ ಪರಂಪರೆ ಬಂದಿದೆ ಎಂಬುದರ ಅರಿವು ನಮ್ಮ ವಿಮರ್ಶಕರಿಗಿರಬೇಕು ಎಂಬುದು ಇವರ ಕಳಕಳಿ. ವಿಮರ್ಶೆಯ ಪೂರ್ವ ಪಶ್ಚಿಮ (1961), ಸೌಂದರ್ಯ ಸಮೀಕ್ಷೆ (1965), ಪರಿಶೀಲನ (1967), ಗತಿಬಿಂಬ (1969), ಕನ್ನಡ ಸಾಹಿತ್ಯ ಸಮೀಕ್ಷೆ (1975), ನವೋದಯ (1976), ಮಹಾಕಾವ್ಯ ಸ್ವರೂಪ (1976), ಅನುರಣನ (1978), ಪ್ರತಿಕ್ರಿಯೆ (1982), ಕಾವ್ಯಾರ್ಥಚಿಂತನ (1983) ಕನ್ನಡ ಕವಿಗಳ ಕಾವ್ಯ ಕಲ್ಪನೆ (1989), ಹೊಸಗನ್ನಡ ಕವಿತೆಗಳಲ್ಲಿ ಕಾವ್ಯಚಿಂತನೆ: ಕೆಲವು ಪ್ರತಿಕ್ರಿಯೆಗಳು (1991)-ಇವು ವಿಮರ್ಶನ ಕೃತಿಗಳು. ಸಹೃದಯತೆ, ಸಂಶೋಧನ ದೃಷ್ಟಿ, ಚಾರಿತ್ರಿಕ ಪ್ರಜ್ಞೆಗಳಿಂದ ಕೂಡಿದ ಈ ಲೇಖನಗಳಲ್ಲಿ ಇವರ ಒಳನೋಟ, ವ್ಯಾಖ್ಯಾನ, ವಿಶ್ಲೇಷಣೆ, ತರ್ಕಬದ್ಧ ವಿವೇಚನೆ ಹೊಸತನವನ್ನು ಮೂಡಿಸುತ್ತವೆ. ಒಂದು ಚಾರಿತ್ರಿಕ ಸಂದರ್ಭ ಮತ್ತು ಸಾಹಿತ್ಯಕೃತಿ-ಇವುಗಳ ನಡುವಿನ ಸಂಬಂಧದಲ್ಲಿನ ನಿಲುವುಗಳ ಅಭ್ಯಾಸಕ್ಕೆ ವಿಮರ್ಶೆಯ ಪೂರ್ವ ಪಶ್ಚಿಮ ಒಂದು ಸಾರ್ಥಕ ನಿದರ್ಶನ. ವಿಮರ್ಶೆಯಲ್ಲಿ ಪೂರ್ವ, ಪಶ್ಚಿಮ ದೃಷ್ಟಿಗಳು, ಒಂದು ಸಾಂಸ್ಕøತಿಕ ಸಂದರ್ಭಕ್ಕೆ ಒಗ್ಗಿಬರುವ ಮಾನದಂಡ ಹಾಗೂ ಎರಡು ಭಿನ್ನ ಸಾಂಸ್ಕøತಿಕ ಸಂದರ್ಭದಲ್ಲಿ ಏರ್ಪಟ್ಟಿರುವ ಮಾನದಂಡಗಳನ್ನು ಯಾವ ಮಟ್ಟದ ಔಚಿತ್ಯದಲ್ಲಿ ಗ್ರಹಿಸಬೇಕು ಮುಂತಾದ ಸಾಹಿತ್ಯಾಭ್ಯಾಸಿಯ ಪ್ರಶ್ನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಕೃತಿಯ ವಿನ್ಯಾಸ ರೂಪುಗೊಂಡಿದೆ. ಕಾವ್ಯಮೀಮಾಂಸೆಗೆ ಸಂದ ದೊಡ್ಡಕೊಡುಗೆ ಸೌಂದರ್ಯ ಸಮೀಕ್ಷೆ. ಇದು ರಸದೃಷ್ಟಿಯ ಸಂಶೋಧನೆ. ಸಕಲಕಾವ್ಯಕಲೆಗೂ ಮೂಲವಾದ, ಅಮೂರ್ತ ಸೌಂದರ್ಯವನ್ನು ವಿವೇಚಿಸುವ ಅತಿ ತೊಡಕಿನ ಸಾಹಸ. ಕನ್ನಡದಲ್ಲಿ ಮೊದಲ ಬಾರಿಗೆ ಕವಿಯ ದೃಷ್ಟಿಕೋನದಿಂದ ಕವಿಯ ಅಂತರನುಭವದ ಮೀಮಾಂಸೆ ಇಲ್ಲಿ ನಡೆದಿದೆ. ಸೌಂದರ್ಯದ ಪ್ರಕಾರಗಳನ್ನೂ ಸಂಸ್ಕಾರಗಳನ್ನೂ ಇಷ್ಟು ಸಮಗ್ರವಾಗಿ ವಿಶ್ಲೇಷಿಸುವ ಗ್ರಂಥ ಕನ್ನಡದಲ್ಲಿ ಇದೊಂದೇ. ಒಂದು ಕಾವ್ಯದ ಆಕರ್ಷಣೆಯ ಕಾರಣವನ್ನು ಇಡೀ ಕಾವ್ಯಾನುಭವದ ವ್ಯಾಪ್ತಿಯಲ್ಲಿ ವಿವರಣೆಗೆ ತಂದದ್ದು ಇಲ್ಲಿನ ಸಾಧನೆ. ನವೋದಯ ಸಾಹಿತ್ಯ ಮೀಮಾಂಸೆಯ ಲಕ್ಷಣಗಳನ್ನು ಪ್ರತಿನಿಧಿಸುವಾಗಲೇ ಅದರ ಮಿತಿಗಳನ್ನು ಇದು ಸೂಚಿಸುತ್ತದೆ. ಸಹಜವಾಗಿಯೇ ಇಂಥ ಸಾಹಸದ ವಿವರಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ವಿಪುಲ ಅವಕಾಶವಿರುತ್ತದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

	ಇವರು ಸಂಪಾದಿಸಿದ ಕೆ.ಎಸ್.ನರಸಿಂಹ ಸ್ವಾಮಿಯವರ ಅಭಿನಂದನ ಗ್ರಂಥ ಚಂದನ ಇತರ ಸಂಭಾವನಾ ಗ್ರಂಥಗಳಿಗಿಂತ ವಿಶಿಷ್ಟವಾದುದು. ಇತರೊಂದಿಗೆ ಸಂಪಾದಿಸಿದ ದರ್ಶನ ವಿಮರ್ಶೆ, ಪ್ರಾಯೋಗಿಕ ವಿಮರ್ಶೆ ಇವರ ಸಮುಚಿತ ವಿವೇಚನೆಯ ದ್ಯೋತಕಗಳು. 1971ರಲ್ಲಿ ಪ್ರಾರಂಭಿಸಿದ ಸಾಹಿತ್ಯವಾರ್ಷಿಕ ಆಯಾವರ್ಷ ಹೊರಬಂದ ಕನ್ನಡ ಕೃತಿಗಳ ಒಂದು ಸಮಗ್ರಪಟ್ಟಿಯನ್ನೂ ಅವುಗಳ ವಿಮರ್ಶೆಯನ್ನೂ ಒಳಗೊಂಡಿದೆ. ಬಿ.ಎನ್. ಶಾಸ್ತ್ರಿಗಳೊಂದಿಗೆ ಸಂಗ್ರಹಿಸಿದ ಶಬರ ಶಂಕರ ವಿಳಾಸ ಸಂಗ್ರಹ ಕವಿ ಮತ್ತು ಕೃತಿಗಳ ನಿಜಸ್ವರೂಪವನ್ನು ಒಂದು ಪರಿಮಿತ ವ್ಯಾಪ್ತಿಯಲ್ಲಿ ತೋರಿಸಿಕೊಡುವ ಸಂಗ್ರಹ ಕಲಾ ಶೀಲರ ಕಲೆಗೆ ಸಾಕ್ಷಿ. ಇತರ ಸಂಪಾದಿತ ಕೃತಿಗಳಿಗೆಲ್ಲ ಕಿರೀಟ ಪ್ರಾಯವಾದದ್ದು ಅವರ ಪ್ರಧಾನ ಸಂಪಾದಕತ್ವದ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ. ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆಯ 10 ಸಂಪುಟಗಳು ಕನ್ನಡದ ನಿಜವಾದ ಪ್ರಜ್ಞೆಯನ್ನು ಸರಳವಾಗಿ ಎಲ್ಲರಿಗೂ ಮುಟ್ಟಿಸುವಂಥವು. ಇವರಿಗೆ ಹಲವಾರು ಪುರಸ್ಕಾರಗಳು ಲಭ್ಯವಾಗಿವೆ. ಮಾಸ್ಕೋದಲ್ಲಿ 22ದಿನ ಎಂಬ ಪ್ರವಾಸ ಸಾಹಿತ್ಯಕೃತಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (1974), ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ (1982), ಕಾವ್ಯಾರ್ಥ ಚಿಂತನಕ್ಕೆ ವರ್ಷದ ಅತ್ಯುತ್ತಮ ಕೃತಿ ಬಹುಮಾನ (1983), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1984), ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (1984), ಮದರಾಸು ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ (1986), 61ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪದವಿ (1987), ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕ (1994-95), ಪಂಪ ಪ್ರಶಸ್ತಿ (1998), ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟೊರೇಟ್ ಪದವಿ (2003) ಇವುಗಳಲ್ಲಿ ಮುಖ್ಯವಾದುವು. ಇವರಿಗೆ ಸ್ನೇಹ ಕಾರ್ತೀಕ, ಗೌರವ,  ಹಣತೆ (2001) ಎಂಬ ಅಭಿನಂದನ ಗ್ರಂಥಗಳನ್ನು ಇವರ ಶಿಷ್ಯರು ಮತ್ತು ಅಭಿಮಾನಿಗಳು ಪ್ರೀತಿಯಿಂದ ಸಮರ್ಪಿಸಿದ್ದಾರೆ.						
		(ವಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ